ಪ್ರಭೇದ - 
ಲೈಂಗಿಕ ರೀತಿಯ ಪ್ರಜನನ ತೋರುವ ಮತ್ತು ಅನ್ಯ ನಿಷೇಚನದಲ್ಲಿ ತೊಡಗುವ ಪ್ರಾಣಿಗಳಲ್ಲಿಯ ಹಾಗೂ ಸಸ್ಯಗಳಲ್ಲಿಯ ವಾಸ್ತವವಾಗಿ ಪರಸ್ಪರ ಅಡ್ಡತಳೀಕರಣಗೊಳ್ಳುವ ಇಲ್ಲವೆ ಒಂದರೊಡನೊಂದು ಅಡ್ಡತಳೀಕರಣಗೊಳ್ಳುವ ಸಾಮಥ್ರ್ಯವುಳ್ಳ ಸಂದಣಿ ಅಥವಾ ಸಂದಣಿಗಳ ಗುಂಪು (ಸ್ಪೀಷೀಶ್). ಅಂದರೆ ಯಾವುದೇ ಜೀವಿಸಂದಣಿಯ ಸದಸ್ಯಗಳು ತಮ್ಮ ಆನುವಂಶಿಕ ವಸ್ತುವನ್ನು (ಜೀನ್‍ಗಳನ್ನು) ಮುಕ್ತರೀತಿಯಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳಬಲ್ಲವಾದರೆ ಮತ್ತು ವಿಭಿನ್ನ ಸಂದಣಿಯ ಸದಸ್ಯಗಳೊಂದಿಗೆ ಈ ರೀತಿ ಜೀನ್ ವಿನಿಮಯ ಮಾಡಿಕೊಳ್ಳಲಾರವಾದರೆ, ಇಂಥ ಜೀವಿಗಳನ್ನು ವಿಭಿನ್ನ ಪ್ರಭೇದಗಳೆಂದು ಕರೆಯಬಹುದು. ಕಳೆದ ಮೂರು ನಾಲ್ಕು ದಶಕಗಳಲ್ಲಿ ಬೆಳೆದುಬಂದಿರುವ ಜೀವಿ ಸಂದಣಿ ತಳಿವಿಜ್ಞಾನದ (ಪಾಪ್ಯುಲೇಶನ್ ಜೆನೆಟಿಕ್ಸ್) ಅಧ್ಯಯನಗಳಿಂದ ಈ ಪರಿಕಲ್ಪನೆ ರೂಪು ತಳೆದಿದೆ. ನಿಸರ್ಗದಲ್ಲಿ ಕಾಣದೊರೆಯುವ ಲೈಂಗಿಕರೀತಿಯ ಪ್ರಜನನ ನಡೆಸುವ ಮತ್ತು ಅನ್ಯ ನಿಷೇಚನದಲ್ಲಿ ತೊಡಗುವ ಜೀವಿಗಳು, ಆತ್ಯಂತ ಸಂಕೀರ್ಣರೀತಿಯ ಸಂದಣಿಗಳನ್ನು ರೂಪಿಸಿಕೊಂಡಿರುವುವು. ಇಂಥ ಸಂದಣಿಗಳ ಸದಸ್ಯಗಳು ತಮ್ಮ ತಮ್ಮೊಳಗೇ ಸಂಭೋಗ ಕ್ರಿಯೆಯಲ್ಲಿ ತೊಡಗುವುದರಿಂದ ಎಲ್ಲ ಸದಸ್ಯಗಳಿಗೂ ಲಭ್ಯವಾಗುವಂಥ ಜೀನ್ ಭಂಡಾರಗಳನ್ನೇ ನಿರ್ಮಿಸುವುವಲ್ಲದೆ ಮೆಂಡಲೀಯ ಮರುಸಂಯೋಜನಾ ಪ್ರಕ್ರಿಯೆಯ ಮೂಲಕ ಆಯಾ ಪ್ರಭೇದದ ಮುಂದಿನ ವಿಕಾಸಕ್ಕೂ ಅವಕಾಶ ಕಲ್ಪಿಸಿಕೊಳ್ಳುವುವು. ಇದರಿಂದಾಗಿ ಈ ಸಂದಣಿಗಳ ಸದಸ್ಯ ಗುಂಪುಗಳ ನಡುವೆ ಗಮನಾರ್ಹವಾದ ವೈವಿಧ್ಯವಿರುತ್ತದಾದರೂ ಅವುಗಳ ಬಾಹ್ಯರೂಪ, ಸ್ವಭಾವ, ವೈವಿಧ್ಯಗಳ ವಿತರಣೆ ಮುಂತಾದ ಗುಣಲಕ್ಷಣಗಳಲ್ಲಿ ಪರಸ್ಪರ ಹೋಲಿಕೆಗಳಿದ್ದೇ ಇರುವುವು. ಮತ್ತು ಇವೇ ಗುಣಲಕ್ಷಣಗಳಲ್ಲಿ ಬೇರೆ ಸಂದಣಿಯ ಜೀವಿಗಳೊಂದಿಗೆ (ಅಂದರೆ ಬೇರೆ ಪ್ರಭೇದಗಳೊಂದಿಗೆ) ವ್ಯತ್ಯಾಸಗಳನ್ನು ತೋರಿಸುತ್ತಿದ್ದು, ಸಂಭೋಗಕ್ರಿಯೆಯನ್ನು ನಡೆಸಲಾರದವಾಗಿರುವುವು. ವಿಭಿನ್ನ ಪ್ರಭೇದಗಳು ಒಟ್ಟೊಟ್ಟಿಗೇ, ಒಂದೇ ಪರಿಸರದಲ್ಲಿ ಜೀವಿಸುತ್ತಿರಬಹುದಾದರೂ ಅವುಗಳ ನಡುವೆ ಜೀನ್‍ವಿನಿಮಯ ನಡೆಯದು. ಈ ಸ್ಥಿತಿಗೆ, ಇವುಗಳಲ್ಲಿ ಪ್ರಜನನ ಪ್ರತ್ಯೇಕತಾ ಸಂಯಂತ್ರಗಳಿರುವುದೇ ಕಾರಣ. ಸಂಭೋಗದಲ್ಲಿ ತೊಡಗಲು ಅಸಮರ್ಥತೆ, ಅಕಸ್ಮಾತ್ ಅಡ್ಡ ಹಾಯ್ಕೆ ನಡೆದಾಗ ಹುಟ್ಟಬಹುದಾದ ಸಂತತಿಗಳಿಗೆ ಜೀವನ ನಿರ್ವಹಣಾಸಾಮಥ್ರ್ಯವಿಲ್ಲದಿರುವುದು, ಅಡ್ಡತಳಿಗಳು ಬಂಜೆಗಳಾಗಿರುವುದು-ಇವು ಪ್ರಜನನ ಪ್ರತ್ಯೇಕತೆಯ ಕೆಲವು ಸಂಯಂತ್ರಗಳು. ಅಂತೆಯೇ ಭೌಗೋಳಿಕ ತಡೆಗಳೂ ಕೂಡ ಅಂತರತಳೀಕರಣಕ್ಕೆ ನಿರ್ಬಂಧ ಒಡ್ಡುವುವು. ಈ ರೀತಿ ಪರಸ್ಪರ ಅಂತರತಳೀಕರಣ ಆಗದಿರುವುದರಿಂದ ವಿಭಿನ್ನ ಪ್ರಭೇದಗಳ ಗುಣಲಕ್ಷಣಗಳ ವಿಶೇಷತೆ ಉಳಿದುಬರುತ್ತದೆ. ಕೆಲವೊಮ್ಮೆ ಅಪೂರ್ವವಾಗಿ ಇಷ್ಟೆಲ್ಲ ತಡೆಗಳಿದ್ದರೂ ಒಂದು ಪ್ರದೇಶದ ವಿವಿಧ ಸಂದಣಿಗಳ ಅಥವಾ ಗುಂಪುಗಳ ನಡುವೆ ಅಂತರತಳೀಕರಣ ನಡೆಯಬಹುದು. ಆಗ ಬೇರೆ ಬೇರೆ ಸಂದಣಿಗಳ ನಡುವಣ ಮಧ್ಯವರ್ತಿ ಗುಣಲಕ್ಷಣಗಳನ್ನು ಪಡೆದಿರುವಂಥ ಜೀವಿಗಳು ಕಾಣಿಸಿಕೊಳ್ಳಬಹುದು. ಇಂಥ ಜೀವಿಗಳನ್ನು ಒಂದೇ ಪ್ರಭೇಧದ ಉಪಪ್ರಭೇದಗಳೆಂದೋ ವಿಭಿನ್ನ ಪರಿಸರ ಮಾದರಿಗಳೆಂದೋ ನಿರ್ದೇಶಿಸಿಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಪ್ರಭೇದವನ್ನು (ಅದು ಎಷ್ಟೇ ಸಂದಣಿ ಅಥವಾ ಗುಂಪುಗಳನ್ನು ಒಳಗೊಂಡಿರಲಿ) ವಿಕಾಸದ ಒಂದು ಏಕಕವನ್ನಾಗಿ ಪರಿಗಣಿಸಲಾಗಿದೆ. ಇಂಥ ಪ್ರಭೇದ ಬೇರೆ ಪ್ರಭೇದಗಳಿಂದ ತನ್ನ ಮುಂದಿನ ವಿಕಾಸದ ಮೇಲೆ ಪ್ರಭಾವ ಬೀರುವಷ್ಟು ಮೊತ್ತದಲ್ಲಿ ಅನುವಂಶಿಕ ವಸ್ತುವನ್ನು ಪಡೆಯದು. ಆದ್ದರಿಂದಲೆ ಪ್ರಭೇದಕ್ಕೆ ವರ್ಗೀಕರಣ ವ್ಯವಸ್ಥೆಯ ಅರ್ಥಪೂರ್ಣ ಮೂಲ ಘಟಕ ಎಂಬ ಮಹತ್ವ ಉಂಟು.

ಆದರೆ ಎಲ್ಲ ಜೀವಿಗಳಿಗೂ ಲೈಂಗಿಕ ರೀತಿಯ ಪ್ರಜನನದಲ್ಲಿ ತೊಡಗುವ ಇಲ್ಲವೆ ಅನ್ಯನಿಷೇಚನ ನಡೆಸುವ ಸಾಮಥ್ರ್ಯ ಇರುವುದಿಲ್ಲ. ಅಥವಾ ಜೀವಿಗಳ ನಡುವೆ ಜೀನ್ ವಿನಿಮಯ ನಡೆಯಬಲ್ಲುದೇ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗದೇ ಇರಬಹುದು. ಇಂಥ ಸಂದರ್ಭಗಳಲ್ಲಿ ಪ್ರಭೇದದ ವ್ಯಾಖ್ಯೆ ಸುಲಭವಲ್ಲ. ಆಗ ಜೀವಿವರ್ಗೀಕರಣವಿಜ್ಞಾನಿಯ ವಿಧಾನವನ್ನು ಬಳಸಿ ಪ್ರಭೇದ ಎಂದರೇನು ಎಂಬುದಕ್ಕೆ ವಿವರಣೆ ಕೊಡಲಾಗುತ್ತದೆ. ಈ ವಿಧಾನದಲ್ಲಿ ಜೀವಿಗಳ ಬಾಹ್ಯರೂಪದ ಹಾಗೂ ಶಾರೀರಕ ವ್ಯತ್ಯಾಸ ಹೋಲಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಅರ್ಥದಲ್ಲಿ ಪ್ರಭೇದವೆಂದರೆ, ಕೆಲವೊಂದು ವಿಶಿಷ್ಟ ಗುಣಲಕ್ಷಣಗಳನ್ನು ಸಮಾನವಾಗಿ ಉಳ್ಳಂಥ ಜೀವಿಗಳ ಗುಂಪು. ಪ್ರಭೇದದ ಈ ವ್ಯಾಖ್ಯೆಗೆ ಯಾವುದೇ ತೆರನ ನಿರ್ದಿಷ್ಟ ವೈಕಾಸಿಕ ಅರ್ಥವನ್ನು ಆರೋಪಿಸಲಾಗುವುದಿಲ್ಲವಾದರೂ ಯಾವ ಜೀವಿಗಳ ವರ್ಗಸ್ತರವನ್ನು ಪ್ರಾಯೋಗಿಕವಾಗಿಯಾಗಲೀ ಬೇರಾವುದೇ ವಿಧಾನದಿಂದಾಗಲೀ ನಿರ್ಧರಿಸುವುದು ಕಷ್ಟವೆನಿಸಿದಾಗ ಈ ಎರಡನೆಯ ವ್ಯಾಖ್ಯೆಯನ್ನೇ ಬಳಸಲಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ